ಕೋಷೆನೋವ್‍ಸ್ಕಿ, ಜೋಸೆಫ್	
1797-1863 ಪೋಲಿಷ್ ಕವಿ, ನಾಟಕಕಾರ ಮತ್ತು ಕಾದಂಬರಿಕಾರ. ವೃತ್ತಿಯಿಂದ ಉಪಾಧ್ಯಾಯ. ಜೀವನದಲ್ಲೂ ಬರೆವಣಿಗೆಯಲ್ಲೂ ಆದರ್ಶವನ್ನು ಸಾಧಿಸಲು ಯತ್ನಿಸಿದವ. ಜಾನಪದ ಕಥೆಗಳನ್ನು ನಾಟಕರೂಪದಲ್ಲಿ ಚಿತ್ರಿಸಿರುವುದೇ ಈತನ ವೈಶಿಷ್ಟ್ಯ. ಸಾಮಾಜಿಕ ಹಾಗೂ ಸುಖಾಂತ ನಾಟಕಗಳನ್ನೂ ಬರೆದಿದ್ದಾನೆ. ಷೇಕ್ಸ್‍ಪಿಯರ್ ಮತ್ತು ಷಿಲರ್‍ರಂತೆ ಈತನೂ ತನ್ನ ನಾಟಕಗಳಲ್ಲಿ ಶಿಷ್ಟಸಾಹಿತ್ಯಕ್ಕಿಂತ ಭಿನ್ನವಾದ ದಾರಿ ಹಿಡಿದಿದ್ದಾನಲ್ಲದೆ ತನ್ನ ಸುಖಾಂತ ನಾಟಕಗಳಲ್ಲಿ ಪಾತ್ರಗಳನ್ನು ಸೃಷ್ಟಿಸುವಲ್ಲಿ ಮಾದರಿಗಳಿಗಿಂತ (ಟೈಪ್ಸ್) ವ್ಯಕ್ತಿವೈಲಕ್ಷಣಕ್ಕೆ ಹೆಚ್ಚು ಪ್ರಾಮುಖ್ಯ ಕೊಟ್ಟಿದ್ದಾನೆ. ದಿ ಜ್ಯೂಸ್ (1843), ಮ್ಯಾರೀಡ್ ವುಮನ್ ಅಂಡ್ ವಿಡೊ (1844), ಎಂಬ ನಾಟಕಗಳು ಪ್ರಸಿದ್ಧವಾಗಿವೆ. ಈತನ ಸ್ಪೆಕ್ಯುಲಾಂಟ್(1846) ಮತ್ತು ಕಲೋಕಾಸ್ಜ(1847) ಕಾದಂಬರಿಗಳಲ್ಲಿ ಪೋಲಿಷ್ ಜನರ ನಿಜಜೀವನವನ್ನು ಕಾಣಬಹುದು.                      					(ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ